ಬೆಲ್ಗ್ರೇಡ್ 
ಯೂಗೊಸ್ಲಾವಿಯ ಸಮಾಜವಾದಿ ಸಂಯುಕ್ತ ಗಣರಾಜ್ಯದ ಮತ್ತು ಸ್ವಯಮಾಡಳಿತ ಪ್ರದೇಶ ಸರ್ಬಿಯಾದ ರಾಜಧಾನಿ ಹಾಗೂ ಆಡಳಿತ ಕೇಂದ್ರ.  ನಗರ ಡಾನ್ಯೂಬ್ ನದಿಯ ಬಲದಂಡೆಯ ಮೇಲಿದೆ.  ಈ ನಗರದ ಬಳಿಯೇ ಸಾವನದಿ ಡಾನ್ಯೂಬ್ ನದಿಯನ್ನು ಕೂಡಿಕೊಳ್ಳುತ್ತದೆ.  ಬೆಟ್ಟ ಸಾಲಿನ ಮೇಲೆ ಸಮುದ್ರ ಪಾತಳಿಯಿಂದ ಸುಮಾರು 110 ಮೀ ಎತ್ತರದಲ್ಲಿರುವ ಈ ನಗರದ ಭೌಗೋಳಿಕ ಸ್ಥಾನ ಮಹತ್ತ್ವದ್ದು.  ಡಾನ್ಯೂಬ್ ನದಿ ಕೊಳ್ಳದ ಮಾರ್ಗ, ವಿಯೆನ್ನಾದಿಂದ ಕಪ್ಪು ಸಮುದ್ರದ ದಂಡೆಯವರೆಗೆ ಹೋಗುವ ಪೂರ್ವ ಮತ್ತು ಪಶ್ಚಿಮ ಮಾರ್ಗ, ಪಶ್ಚಿಮದತ್ತ ಸಾಗುವ ಸಾವ ಕೊಳ್ಳದ ಮಾರ್ಗ ಟ್ರೀಯಸ್ಟೀ ಮತ್ತು ಉತ್ತರ ಇಟಲಿಯ ಮಾರ್ಗ ಹಾಗೂ ಆಗ್ನೇಯದ ಮೊರಾವಾ ಮತ್ತು ವರ್ಡರ್ ನದೀ ಕೊಳ್ಳಗಳ ಮಾರ್ಗ,  ಏಜಿಯನ್ ಸಮುದ್ರ ತಲಪುವ ಮಾರ್ಗಗಳು ಕೂಡುವಲ್ಲಿ ಈ ನಗರವಿದೆ.  ನಗರ ವಿಸ್ತೀರ್ಣ 706 ಚಕಿಮೀ (1961) ಜನಸಂಖ್ಯೆ 1,300,000 (1980). 

ನಗರದ ಉತ್ತರ, ಪಶ್ಚಿಮಗಳಲ್ಲಿ ವಾಯ್ವೊಡೀನದ ಪನೊನೀಯ ಬಯಲು ಹಬ್ಬಿದೆ.  ಈ ಬಯಲು ಧಾನ್ಯದ ಕಣಜ.  ದಕ್ಷಿಣಕ್ಕೆ ವೈವಿಧ್ಯದ ಬೇಸಾಯ ಮಾಡುವ ಸುಮಾಡಿಯ ಗುಡ್ಡ ಪ್ರದೇಶವಿದೆ.  ಸಮಶೀತೋಷ್ಣ ಹಾಗೂ ಖಂಡಾಂತರ ಹವಾಗುಣ.  ವರ್ಷದಲ್ಲಿ ಸುಮಾರು 634 ಮಿಮೀನಷ್ಟು ಮಳೆ ಬೀಳುತ್ತದೆ.

ಬೆಲ್ಗ್ರೇಡ್ ನಗರದಲ್ಲಿ ಅನೇಕ ಆಧುನಿಕ ಕಾರ್ಖಾನೆಗಳಿವೆ.  ಹತ್ತಿಯ ವಿವಿಧ ಬಟ್ಟೆ ಮತ್ತು ಇತರ ವಸ್ತುಗಳು, ಸಕ್ಕರೆ, ಬ್ರಾಂದಿ, ಚರ್ಮವಸ್ತುಗಳು ವಿವಿಧ ವಿದ್ಯುತ್ ಉಪಕರಣಗಳು ತಯಾರಾಗುತ್ತವೆ.  1970ರಲ್ಲಿ ಯೂಗೊಸ್ಲಾವಿಯದ ಕೈಗಾರಿಕಾ ಉತ್ಪನ್ನದ ಶೇಕಡಾ 8ರಷ್ಟು ಈ ನಗರದಲ್ಲಿ ತಯಾರಾಗುತ್ತಿತ್ತು.  ಮೋಟಾರ್, ಟ್ರಾಕ್ಟರ್ ಮತ್ತು ಅವುಗಳ ಉಪಸಂಯೋಜಕಗಳು, ಯಾಂತ್ರಿಕ ಉಪಕರಣ, ವಿದ್ಯುತ್ ಸರಕರಣೆ, ರಾಸಾಯನಿಕ, ಬಟ್ಟೆ ಮತ್ತು ಕಟ್ಟಡ ವಸ್ತುಗಳು ತಯಾರಾಗುತ್ತವೆ.  ಮೂರು ಅಂತಾರಾಷ್ಟ್ರೀಯ ರೈಲು ಮಾರ್ಗಗಳು ಸುಮಾರು ಹತ್ತು ಹೆದ್ದಾರಿಗಳ ಸಂಪರ್ಕ ಅಂತೆಯೇ ಆರು ನದಿಗಳ ನೌಕಾ ಸಂಪರ್ಕವಿರುವ ಬೆಲ್ಗ್ರೇಡ್ ಇಡೀ ರಾಜ್ಯದ ಅರ್ಧಕ್ಕೂ ಹೆಚ್ಚು ವಿದೇಶೀ ವ್ಯಾಪಾರವನ್ನು ನಿರ್ವಹಿಸುತ್ತದೆ.  ನಗರದ ಪಶ್ಚಿಮಕ್ಕೆ 16 ಕಿಮೀ ದೂರದ ಸರ್ಸಿನ್ನಿನಲ್ಲಿ ವಿಮಾನ ನಿಲ್ದಾಣವಿದೆ.  ಬೆಲ್ಗ್ರೇಡ್ ಒಂದು ದೊಡ್ಡ ವ್ಯಾಪಾರ ವಾಣಿಜ್ಯ ಹಾಗೂ ರಾಜಕೀಯ ಚಟುವಟಿಕೆಗಳ ಕೇಂದ್ರ.  ಅನೇಕ ಸರಕಾರಿ ಸಂಘ ಸಂಸ್ಥೆಗಳೂ ಸಾಂಸ್ಕøತಿಕ ಮತ್ತು ಆರ್ಥಿಕ ಸಂಸ್ಥೆಗಳೂ ಇವೆ.  ವಿಶ್ವವಿದ್ಯಾಲಯ 1863ರಲ್ಲಿ ಸ್ಥಾಪಿತವಾಯಿತು.  ಅನೇಕ ಉಚ್ಚ ಶಿಕ್ಷಣ ಸಂಸ್ಥೆಗಳು, ಶಾಲಾ ಕಾಲೇಜುಗಳೂ ಇವೆ.  ಇಲ್ಲಿ 10 ವಸ್ತು ಸಂಗ್ರಹಾಲಯ ಮತ್ತು ಚಿತ್ರಶಾಲೆಗಳಿವೆ.  ಅವುಗಳಲ್ಲಿ 1844ರಲ್ಲಿ ಅಸ್ತಿತ್ವಕ್ಕೆ ಬಂದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಅತಿ ಹಳೆಯದು.  ಬೆಲ್ಗ್ರೇಡ್ 7 ನಾಟಕ ಗೃಹಗಳು ಮತ್ತು ಸುಮಾರು 30 ಕಲಾ ಸಂಘ ಮತ್ತು ಸಂಸ್ಥೆಗಳಿಗೆ ಆಶ್ರಯವಿತ್ತಿದೆ.  ನದಿಗಳ ದಡಗಳಲ್ಲಿ ಮತ್ತು ಹತ್ತಿರದ ಗುಡ್ಡಗಳಲ್ಲಿ ವಿಹಾರ ಕೇಂದ್ರಗಳಿವೆ.  ಬೆಲ್ಗ್ರೇಡಿನ ದಕ್ಷಿಣಕ್ಕೆ ಸುಮಾರು 19 ಕಿಮೀ ದೂರದಲ್ಲಿರುವ ಅಮಲಾದಲ್ಲಿ ಐವಾನ್ ಮೆಸ್ಟ್ರೋವಿಕ್ ಮತ್ತು ಅಜ್ಜಾತಯೋಧರ ಸ್ಮಾರಕಗಳು ಮತ್ತು ದೂರದರ್ಶನ ಗೋಪುರ ಇವೆ.  ನಗರದ ಸುತ್ತಮುತ್ತ ದೊಡ್ಡ ಉದ್ಯಾನಗಳನ್ನು ಬೆಳೆಸಿದ್ದಾರೆ.  ಹಾಳು ಬಿದ್ದಿರುವ ಇತಿಹಾಸ ಪ್ರಸಿದ್ಧ ಕೋಟೆ ಡಾನ್ಯೂಬ್ ಮತ್ತು ಸಾವನದಿಗಳ ಮೇಲ್ಗಡೆಯಲ್ಲಿದೆ.  ಕೋಟೆಯ ಮೇಲ್ಭಾಗದಲ್ಲಿ ಸೆರೆಮನೆಗಳು ಮತ್ತು ಒಂದು ಸೈನ್ಯ ವಸ್ತುಸಂಗ್ರಹಾಲಯ ಹಾಗೂ ಕೆಳಭಾಗದಲ್ಲಿ ಸೈನಿಕ ವಸತಿ ಗೃಹ, ಮದ್ದು ಗುಂಡುಗಳ ಉಗ್ರಾಣ ಮತ್ತು ಚಕ್ರವರ್ತಿ ಚಾರ್ಲ್ ಹೆಬ್ಬಾಗಿಲು ಇವೆ.  ಕೋಟೆಯ ದಕ್ಷಿಣಕ್ಕೆ ಬೆಲ್ಗ್ರೇಡಿನ ಮುಖ್ಯ ಆಕರ್ಷಣೆಗಳಲ್ಲೊಂದಾದ ಕಾಲೆಮೆಗ್ಡಾನ್ ಉದ್ಯಾನವಿದೆ. 

ಬೆಲ್ಗ್ರೇಡಿನ ಯುದ್ಧಾನುಕೂಲ ಮಹತ್ವವನ್ನು ಬಹು ಹಿಂದೆಯೇ ಗುರುತಿಸಲಾಗಿತ್ತು.  ಆ ಕಾರಣದಿಂದಾಗಿಯೇ ಈ ನಗರವನ್ನು ಹಿಂದೆ ಇಟಲಿಯನ್ನರು, ಕೆಲ್ಟರು, ರೋಮನ್ನರು, ಹೂಣರು, ಅವಾರರು, ಫ್ರಾಂಕರು, ಮಗ್ಯಾರರು, ಸರ್ಬಿಯನ್ನರು ಮತ್ತು ತುರ್ಕರು ಆಕ್ರಮಿಸಿಕೊಂಡು ಆಳಿದರು.  ಶಿಲಾಯುಗದಲ್ಲಿ ಇಲ್ಲಿ ಜನವಸತಿ ಇದ್ದುದಕ್ಕೆ ಕುರುಹುಗಳಿವೆ.  ಕ್ರಿ.ಪೂ. 4ನೆಯ ಶತಮಾನದಲ್ಲಿ ಕೆಲ್ಟರು ಇಲ್ಲೊಂದು ಕೋಟೆಕಟ್ಟಿದರು. ರೋಮನ್ನರು ಕೋಟೆಯ ಮಾರ್ಗಗಳನ್ನೂ ಸಾವದ ಮೇಲೆ ಸೇತುವೆಯನ್ನೂ ಕಟ್ಟಿದರು. ನೆಲಗಟ್ಟು ಹಾಕಿದ ರಸ್ತೆಗಳು, ದೇವಾಲಯಗಳು, ಒಂದು ವರ್ತುಲನಾಟಕಶಾಲೆ ಮತ್ತು ಸಾರ್ವಜನಿಕ ಕಟ್ಟಡಗಳನ್ನು ಕೂಡ ಕಟ್ಟಿದರು.  ಇವೆಲ್ಲ 442ರಲ್ಲಿ ನೆಲಸಮವಾದುವು.  ಆಮೇಲೆ ಬೆಲ್ಗ್ರೇಡ್ ಅನೇಕ ಸಲ ಹಸ್ತಾಂತರಗೊಂಡು 11ನೆಯ ಶತಮಾನದಲ್ಲಿ ಬೈeóÁಂಟಿಯನ್ನರ ನಗರವಾಯಿತು.  1284ರಲ್ಲಿ ಸರ್ಬಿಯನ್ನರ ವಶವಾಗಿ 1402ರಲ್ಲಿ ಸರ್ಬಿಯಾದ ರಾಜಧಾನಿಯಾಯಿತು.  1521ರಲ್ಲಿ ತುರ್ಕಿಯ 1ನೆಯ ಸುಲೇಮಾನ್ ಅದನ್ನು ಗೆದ್ದುಕೊಂಡ ಬಳಿಕ ಅದು ಆಸ್ಟ್ರಿಯನ್ನರು ಆಕ್ರಮಿಸಿಕೊಂಡಿದ್ದ ಮೂರು ಅವಧಿಗಳನ್ನು ಬಿಟ್ಟರೆ (1688-90, 1717-39 ಮತ್ತು 1789-91) ಬಹುಕಾಲ ತುರ್ಕರ ವಶದಲ್ಲಿತ್ತು.  ಆ ಕಾಲದಲ್ಲಿ ಆಟೋಮನ್ ಸಾಮ್ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಸರಕು ಬರುತ್ತಿತ್ತು.  ಮತ್ತೆ 1807ರಿಂದ 1813ರ ಅವಧಿಯಲ್ಲಿ ಸರ್ಬಿಯಾದ ರಾಜಧಾನಿಯಾಯಿತು.  ಅನಂತರ, ಅದು ಮತ್ತೆ ತುರ್ಕರ ಕೈಸೇರಿತು.  1867ರಲ್ಲಿ ಅದು ತಿರುಗಿ ಸರ್ಬಿಯಾದ ರಾಜಧಾನಿಯಾಯಿತು.  1ನೆಯ ಮಹಾಯುದ್ಧದ ಕಾಲಕ್ಕೆ 1914ರ ಜುಲೈಯಲ್ಲಿ ಅದು ಆಸ್ಟ್ರಿಯನ್ನರ ಬಾಂಬು ದಾಳಿಗೆ ತುತ್ತಾಗಿ ಅಕ್ಟೋಬರ್ 1915ರಿಂದ ಸೆಪ್ಟೆಂಬರ್ 1918ರ ತನಕ ಅವರ ವಶದಲ್ಲಿತ್ತು.  2ನೆಯ ಮಹಾ ಯುದ್ಧ ನಡೆದಾಗ ಜರ್ಮನರ ಬಾಂಬುಧಾಳಿಗೆ ಸಿಕ್ಕಿ ನಗರ ಬಹಳಷ್ಟು ಹಾಳಾಯಿತು.  1941ರಲ್ಲಿ ಜರ್ಮನರು ಇದನ್ನು ಗೆದ್ದುಕೊಂಡರು.  1944ರಲ್ಲಿ ಬೆಲ್ಗ್ರೇಡ್ ಸೋವಿಯತ್ ಸೇನೆ ಮತ್ತು ಯೂಗೊಸ್ಲಾವ್ ಪಡೆಗಳ ವಶವಾಯಿತು.  ಯುದ್ಧಾನಂತರ ದುರಸ್ತಿ ನಡೆದು ಅನೇಕ ಹೊಸ ಕಟ್ಟಡಗಳ ನಿರ್ಮಾಣವಾಗಿ ಆಧುನಿಕ ಬೆಲ್ಗ್ರೇಡ್ ನಗರ ರೂಪತಳೆಯಿತು.  
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ